ಪಟೇಲ್, ವಿಟ್ಠಲ ಭಾಯಿ, ಜಾವೇರ್ ಭಾಯಿ
	1873-1933. ನ್ಯಾಯವಾದಿ, ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ. 1873ರಲ್ಲಿ ಜನಿಸಿದರು. ತಂದೆ ಜಾವೇರ್ ಭಾಯಿ ಪಟೇಲರು ಲೇವಾ ಪಾಟಿದಾರ ಮನೆತನಕ್ಕೆ ಸೇರಿದೆ ಸಾಮಾನ್ಯ ರೈತ. ಅವರ ಊರು ಗುಜರಾತಿನ ಖೇಡಾ ಜಿಲ್ಲೆಯ ಕರಮ್‍ಸದ್. ಅವರು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲಕ್ಕೆ ಝಾನ್ಸಿಯ ರಾಣಿಲಕ್ಷ್ಮೀಬಾಯಿಯ ದಂಡಿನಲ್ಲಿ ಸೇರಿಕೊಂಡಿದ್ದು ಬ್ರಿಟಿಷರ ವಿರುದ್ಧ ಹೋರಾಡಿದ್ದರೆಂದು ಹೇಳಲಾಗಿದೆ. ಅವರ ಎರಡನೆಯ ಹೆಂಡತಿ ಲಾಡಬಾಯಿ. ಈ ದಂಪತಿಗಳ ಐದು ಗಂಡು ಮತ್ತು ಒಂದು ಹೆಣ್ಣುಮಕ್ಕಳ ಪೈಕಿ ವಿಟ್ಠಲ ಭಾಯಿ ಮೂರನೆಯವರು. ಸರ್ದಾರ್ ವಲ್ಲಭಭಾಯಿ ಪಟೇಲರು ಇವರ ತಮ್ಮ. ವಿಟ್ಠಲಭಾಯಿ ಕರಮ್‍ಸದ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪ್ರಾರಂಭಿಸಿದರು. ಆಗ ಇವರಿಗೆ ಆರನೆಯ ವರ್ಷ. ಇವರಿಗೆ ಒಂಬತ್ತು ವರ್ಷಗಳು ತುಂಬಿದಾಗ ಆ ಕಾಲದ ಪದ್ಧತಿಯಂತೆ ವಿವಾಹ ಆಯಿತು. 1891ರಲ್ಲಿ ಇವರು ಶಾಲಾಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಾಲ್ಕುವರ್ಷಗಳ ಅನಂತರ ಜಿಲ್ಲಾ ವಕೀಲ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅನಂತರ ಇವರು ವಕಾಲತ್ತು ಪ್ರಾರಂಭಿಸಿ ಅನೇಕ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ನಡೆಸಿದರು. ಅನೇಕ ಸಾರಿ ಇವರು ಅನ್ಯಾಯ ಭ್ರಷ್ಟಾಚಾರಗಳ ವಿರುದ್ಧ ವಾದಿಸಿ ನ್ಯಾಯಕ್ಕೆ ಜಯ ಗಳಿಸಿಕೊಟ್ಟರು. ಎಂಟು ವರ್ಷಗಳ ಕಾಲ ಯಶಸ್ವಿಯಾಗಿ ವಕಾಲತ್ತು ಮಾಡಿದ ಅನಂತರ ಇವರು ಬ್ಯಾರಿಸ್ಟರ್ ಪದವಿಗಾಗಿ ಇಂಗ್ಲೆಂಡಿಗೆ ಹೋದರು. ಅಲ್ಲಿದ್ದಾಗ ದಾದಾಭಾಯಿ ನವರೋಜಿಯವರೊಂದಿಗೆ ಇವರ ಸಂಪರ್ಕ ಬೆಳೆಯಿತು. ವಿಟ್ಠಲ ಭಾಯಿಯವರು ಅವರಿಂದ ಭಾರತದ ಜಟಿಲ ಸಮಸ್ಯೆಗಳನ್ನು ಅರಿತುಕೊಂಡರು. ಭಾರತಕ್ಕೆ ಸ್ವಾತಂತ್ರ್ಯ ಕೊಡುವಂತೆ ಬ್ರಿಟಿಷರ ಸದಸದ್ವಿವೇಚನೆಯನ್ನು ಜಾಗ್ರತಗೊಳಿಸುವುದಕ್ಕೆ ಪತ್ರಿಕೆ, ಸಾರ್ವಜನಿಕ ಭಾಷಣ ಮತ್ತು ಶಾಸನ ಸಭೆಗಳ ಮೂಲಕ ಆಂದೋಲನ ಅವಶ್ಯವೆಂಬುದನ್ನು ಇವರು ಮನಗಂಡರು. ವಿಟ್ಠಲ ಭಾಯಿಯವರು ಪದವಿ ಪಡೆದು ಭಾರತಕ್ಕೆ ಮರಳಿದಮೇಲೆ ಮುಂಬಯಿಯಲ್ಲಿ ನ್ಯಾಯವಾದಿ ವೃತ್ತಿಯನ್ನು ಪ್ರಾರಂಭಿಸಿದರು. ಭಾರತ ಸರ್ಕಾರ ಜಾರಿಗೆ ತಂದ ಮಾರ್ಲೆ-ಮಿಂಟೊ ಸುಧಾರಣೆಗಳಿಂದಾಗಿ ಇವರಿಗೆ 1912ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗುವ ಅವಕಾಶ ದೊರೆಯಿತು. ಅಧಿಕಾರೇತರ ಹಾಗೂ ನಾಮಕರಣ ಸದಸ್ಯರಾಗಿದ್ದ ಆರ್. ಪಿ. ಪರಾಂಜಪೆ ಮತ್ತು ಬಿ. ಎಸ್. ಕಾಮತರ ಸಕ್ರಿಯ ಸಹಾಯದಿಂದ ಇವರು ವಿಧಾನ ಪರಷತ್ತಿನ ಅಧಿಕಾರೇತರ ಸದಸ್ಯರ ಸಂಘವೊಂದನ್ನು ಸ್ಥಾಪಿಸಿದರು. ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದ ಅನೇಕ ಸರ್ಕಾರಿ ನಿರ್ಣಯಗಳ ಮೇಲೆ ಪ್ರಭಾವ ಬೀರುವುದು ಆ ಸಂಘಕ್ಕೆ ಸಾಧ್ಯವಾಯಿತು. 

	ನಗರಸಭೆಗಳು ತಮ್ಮ ಪ್ರದೇಶಗಳಲ್ಲಿ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸುವುದಕ್ಕೆ ಅಧಿಕಾರ ನೀಡುವ ವಿಧೇಯಕ ಇವರ ಒಂದು ಮಹತ್ತ್ವದ ಸಾಧನೆ. ಇವರು ಮುಂಬಯಿಯ ಬಾಂದ್ರಾ ಉಪನಗರ ಸಭೆಯ ಸದಸ್ಯರಾಗಿದ್ದಾಗ ಅಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ಆರಂಭಿಸುವುದಕ್ಕೆ ಕಾರಣರಾದರು. 1917ರಲ್ಲಿ ಕೇಂದ್ರ ವಿಧಾನ ಪರಿಷತ್ತಿನಲ್ಲಿ ತೆರವಾಗಿದ್ದ ಒಂದು ಸ್ಥಾನಕ್ಕೆ ಮುಂಬಯಿ ವಿಧಾನ ಪರಿಷತ್ತು ಇವರನ್ನು ಆರಿಸಿತು. ಅಲ್ಲಿ ಇವರು ಅಂತರ್ಜಾತೀಯ ವಿವಾಹಗಳನ್ನು ಕಾನೂನಿನ ಮೂಲಕ ಕ್ರಮಬದ್ಧಗೊಳಿಸುವುದಕ್ಕೆ ಒಂದು ವಿಧೇಯಕವನ್ನು ಮಂಡಿಸಿದರು. ಪಂಡಿತ ಮದನ ಮೋಹನ ಮಾಲವೀಯರ ನೇತೃತ್ವದಲ್ಲಿ ಮಡಿವಂತ ಸದಸ್ಯರು ಇದನ್ನು ವಿರೋಧಿಸಿದರು. ಸಪ್ರು ಮತ್ತು ಇತರ ಕೆಲವು ಸದಸ್ಯರು ಬೆಂಬಲ ನೀಡಿದರು. ವಿಧೇಯಕದ ಮಂಡನೆಗೆ ಒಪ್ಪಿಗೆ ನೀಡುವ ಸೂಚನೆಗೆ ಅನುಮತಿ ನೀಡುವುದಾಗಿಯೂ ವಿಧೇಯಕವನ್ನು ಜನಾಭಿಪ್ರಾಯಕ್ಕಾಗಿ ಪರಿಪತ್ರಿಸುವುದಾಗಿಯೂ ಸರ್ಕಾರ ಹೇಳಿತು. ಆದರೆ ಪರಿಷತ್ತು ವಿಸರ್ಜನೆಗೊಂಡುದರಿಂದ ವಿಧೇಯಕ ಲುಪ್ತವಾಯಿತು.

	1918ರಲ್ಲಿ ಮುಂಬಯಿಯಲ್ಲಿ ಸೇರಿದ್ದ ಕಾಂಗ್ರೆಸ್ಸಿನ ವಿಶೇಷ ಅಧಿವೇಶನಕ್ಕೆ ಇವರು ಮುಖ್ಯ ಸಚೇತಕರೂ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿದ್ದರು. ತುರ್ತು ಪರಿಸ್ಥಿüತಿಯಲ್ಲಿ ಸರ್ಕಾರಕ್ಕೆ ವಿಶೇಷ ದಂಡಾಧಿಕಾರ ನೀಡುವ ವಿಧೇಯಕವೂ ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕವೂ ಭಾರತೀಯರ ಮೂಲಭೂತ ಹಕ್ಕುಗಳನ್ನು ಮೊಟಕುಗಳಿಸುತ್ತವೆಂದೂ ಆರೋಗ್ಯಕರ ಸಾರ್ವಜನಿಕ ಅಭಿಪ್ರಾಯದ ಬೆಳವಣಿಗೆಗೆ ವಿರೋಧವಾಗಿದೆಯೆಂದೂ ಅಧಿವೇಶನ ಖಂಡಿಸಿತು. ಸರ್ಕಾರ 1919ರಲ್ಲಿ ಈ ವಿಧೇಯಕಗಳನ್ನು ಮಂಡಿಸುವ ಸೂಚನೆಯಿತ್ತಿತ್ತು. ಈ ಪ್ರಯತ್ನ ಮುಂದುವರಿದರೆ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಗಾಂಧೀಜಿ ಎಚ್ಚರಿಸಿದರು. ವಿಟ್ಠಲಭಾಯಿಯವರು ಪರಿಷತ್ತಿನೊಳಗೆ ಇದನ್ನು ತಡೆಗಟ್ಟಲು ನಿಶ್ಚಯಿಸಿದರು. ಪ್ರಾರಂಭದಲ್ಲಿ ಇವರು ಮಸೂದೆಗಳ ಮಂಡನೆಯನ್ನು ಆರು ತಿಂಗಳುಗಳ ಕಾಲ ಮುಂದೆ ಹಾಕಬೇಕೆಂದರು. ಕ್ರಾಂತಿಕಾರಿ ಅಪರಾಧಗಳು ರಾಜಕೀಯ ಹಾಗೂ ಆಡಳಿತ ಜಡತೆಯ ಪರಿಣಾಮವೆಂದು ಇವರು ಹೇಳಿದರು. ದಬ್ಬಾಳಿಕೆಯ ಕಾನೂನಿಗಳಿಂದ ಅವನ್ನು ನಿವಾರಿಸಲಾಗುವುದಿಲ್ಲವೆಂಬುದು ಇವರ ಮತವಾಗಿತ್ತು. ಸರ್ಕಾರ ಈ ವಿಧೇಯಕಗಳನ್ನು ಮುಂದುವರಿಸಿದಾಗ ಇವರು ಸುಮಾರು 250 ತಿದ್ದುಪಡಿಗಳನ್ನು ಸೂಚಿಸಿದರು. ಕೊನೆಯಲ್ಲಿ ಮೂರು ವರ್ಷಗಳವರೆಗಷ್ಟೇ ಅವು ಜಾರಿಯಲ್ಲಿರಬೇಕೆಂಬ ಷರತ್ತಿನ ಮೇಲೆ ಈ ವಿಧೇಯಕಗಳು ಅಂಗೀಕೃತವಾದುವು.

	1919ರಲ್ಲಿ ಮಾಂಟೆಗೂ ಕಾಮನ್ಸ್ ಸಭೆಯಲ್ಲಿ ಭಾರತ ವಿಧೇಯಕವನ್ನು ಮಂಡಿಸಿದ. ದ್ವಿತೀಯ ವಾಚನದ ಅನಂತರ ಅದರ ಷರತ್ತುಗಳನ್ನು ಪರಿಶೀಲಿಸುವುದಕ್ಕೆ ಮತ್ತು ಸಾಕ್ಷ್ಯ ಸಂಗ್ರಹಣೆಗೆ ಲಾರ್ಡ್ ಸೆಲ್ಬರ್ನನ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಲಾಯಿತು. ವಿಧೇಯಕವನ್ನು ಕುರಿತ ಪ್ರಚಾರಕಾರ್ಯಕ್ಕಾಗಿ ಭಾರತದ ವಿವಿಧ ರಾಜಕೀಯ ಪಕ್ಷಗಳು ತಂತಮ್ಮ ಸದಸ್ಯರನ್ನು ಇಂಗ್ಲೆಂಡಿಗೆ ಕಳಿಸಿದುವು. ವಿಟ್ಠಲ ಭಾಯಿ ಪಟೇಲರು ಕಾಂಗ್ರೆಸ್ಸಿನ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದರು. ಬ್ರಿಟಿಷ್ ಜನತೆಯಲ್ಲಿ ಭಾರತದ ದೃಷ್ಟಿಕೋನವನ್ನು ಪ್ರತಿಪಾದಿಸಿ ಅವರ ಸಹಾನುಭೂತಿಗಳಿಸುವ ಉದ್ದೇಶದಿಂದ ಇವರು ಸಮಿತಿಗೆ ಒಂದು ತರ್ಕಬದ್ಧ ಜ್ಞಾಪಕಪತ್ರ ಸಲ್ಲಿಸಿದರು. ಸಮಿತಿಯ ಸದಸ್ಯರಿಗೆ ವಿಟ್ಠಲ ಭಾಯಿಯವರ ಸಂವಿಧಾನಜ್ಞಾನದ ಮನವರಿಕೆಯಾಯಿತು. ಇವರು ಲಂಡನ್ ಮತ್ತು ಉಪನಗರಗಳಲ್ಲಿ ಸಾರ್ವಜನಿಕ ಭಾಷೆಗಳನ್ನು ಮಾಡಿದರು.

	1921ರಲ್ಲಿ ಇವರು ದೆಹಲಿ ವಿಧಾನ ಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಬಾರ್ಡೋಲಿಯಲ್ಲಿ ನಡೆದ ಚಳವಳಿಯಲ್ಲಿ ಭಾಗವಹಿಸಿದರು. ಮುಂದೆ ಇವರು ಮಾಂಡವಿ ವಿಭಾಗದಿಂದ ಮುಂಬಯಿ ಪುರಸಭೆಯ ಚುನಾಯಿತ ಸದಸ್ಯರಾದರಲ್ಲದೆ ಶಾಲಾ ಸಮಿತಿಯ ಅಧ್ಯಕ್ಷತೆಗೂ ಚುನಾಯಿಸಲ್ಪಟ್ಟರು. ಶುಲ್ಕರಹಿತ ಕಡ್ಡಾಯ ಶಿಕ್ಷಣ, ಹಿಂದೀ ಶಿಕ್ಷಣ, ಅನುಸೂಚಿತ ಜಾತಿಗಳ ವಿದ್ಯಾಭ್ಯಾಸ ಮುಂತಾದ ವಿಚಾರಗಳಲ್ಲಿ ಇವರು ವಿಶೇಷ ಆಸಕ್ತಿ ವಹಿಸಿದರು. ರಾಷ್ಟ್ರವಾದಿಗಳ ಪಕ್ಷವನ್ನು ಸ್ಥಾಪಿಸಿ ಅದರ ಚುನಾಯಿತ ಅಧ್ಯಕ್ಷರಾದರು. ಒಂದು ವರ್ಷದ ಅನಂತರ ಇವರು ಪುರಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು. ಜಿ. ಎಸ್. ವೈದ್ಯಕೀಯ ಕಾಲೇಜು ಮತ್ತು ಕೆ. ಇ. ಎಮ್. ಆಸ್ಪತ್ರೆಗಳ ಸ್ಥಾಪನೆಯಲ್ಲಿ ಇವರು ವಹಿಸಿದ ಆಸಕ್ತಿ ವಿಶೇಷವಾದ್ದು. ಗಾಂಧಿಯವರಿಗೆ ಮಾನಪತ್ರ ನೀಡುವ ಸೂಚನೆಯನ್ನು ಪುರಸಭೆ ಬಲವಾದ ವಿರೋಧದ ಎದುರಿನಲ್ಲಿ ಇವರ ಅಧ್ಯಕ್ಷತೆಯಲ್ಲಿ ಅಂಗೀಕರಿಸಿತು. ಹೊಸ ವೈಸ್‍ರಾಯ್ ಲಾರ್ಡ್ ರೀಡಿಂಗನನ್ನು ಸ್ವಾಗತಿಸುವುದಕ್ಕೆ ಮತ್ತು ಅವನ ಗೌರವಾರ್ಥ ಸಮಾರಂಭಗಳಿಗೆ ಹೋಗುವುದಕ್ಕೆ ಇವರು ನಿರಾಕರಿಸಿದರು. ಪಟೇಲರು ಪುರಸಭೆಯ ಸದಸ್ಯತ್ವಕ್ಕೆ ಒಂದು ವರ್ಷದ ಅನಂತರ ರಾಜೀನಾಮೆ ನೀಡಿದಾಗ, ಕಮಿಷನರ್ ಆಗಿದ್ದ ಹೆಚ್. ಬಿ. ಕ್ಲೇಟನ್, ಪಟೇಲರ ಅಧ್ಯಕ್ಷತೆಯಲ್ಲಿ ಮಾಡಲಾದ ನಿರ್ಣಯಗಳ ಬಗ್ಗೆ ಯಾವ ಸದಸ್ಯನಿಗೂ ಯಾವ ಸಂಶಯಕ್ಕೂ ಎಡೆ ಇರಲಿಲ್ಲವೆಂದು ಶ್ಲಾಘಿಸಿದ.

	1924ರ ಜನವರಿಯಲ್ಲಿ ಇವರು ಸ್ವರಾಜ್ಯ ಪಕ್ಷದ ಅಭ್ಯರ್ಥಿಯಾಗಿ ಭಾರತದ ವಿಧಾನಸಭೆಯ ಸದಸ್ಯರಾಗಿ, ಪಕ್ಷದ ಉಪನಾಯಕರಾಗಿ ಚುನಾಯಿತರಾದರು. ಇವರು ಭಾರತೀದಂಡ ಸಂಹಿತೆ ಮತ್ತು ದಂಡ ಪ್ರಕ್ರಿಯಾ ಸಂಹಿತೆಯ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿದರು. ರಾಜದ್ರೋಹಕ್ಕೆ ಗಡಿಪಾರಿನ ಇಲ್ಲವೇ ಕಠಿಣ ಶಿಕ್ಷ್ಷೆಯ ಬದಲಾಗಿ ಸಾದಾ ಶಿಕ್ಷೆಯನ್ನಷ್ಟೇ ವಿಧಿಸಬೇಕೆಂದೂ ಮೂಲ ಅಧಿನಿಯಮದಲ್ಲಿದ್ದ ವರ್ಣಬೇಧವನ್ನು ತೊಡೆದುಹಾಕಬೇಕೆಂದೂ ಇವರು ಬಯಸಿದ್ದರು. ಆದರೆ ಸಭೆ ಇವರ ತಿದ್ದುಪಡಿಗಳನ್ನು ಒಪ್ಪಲಿಲ್ಲ.

	1925ರ ಆಗಸ್ಟ್‍ನಲ್ಲಿ ಇವರು ಕೇಂದ್ರ ವಿಧಾನಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು. ಪ್ರಸಾಧನ ಸೌಲಭ್ಯ ವಿಚಾರದಲ್ಲಿ ಅನುಸರಿಸಲಾಗುತ್ತಿದ್ದ ವರ್ಣಬೇಧವನ್ನು ಇವರು ದೂರ ಮಾಡಿದರು. ಎರಡನೆಯದಾಗಿ, ಸರ್ಕಾರಿ ಸದಸ್ಯರೂ ಸೇರಿದಂತೆ ಎಲ್ಲರೂ ಸಭೆಯನ್ನು ಪ್ರವೇಶಿಸುವಾಗ ಮತ್ತು ಬಿಡುವಾಗ ಅಧ್ಯಕ್ಷಸ್ಥಾನಕ್ಕೆ ತಲೆಬಾಗಬೇಕೆಂಬ ನಿಯಮವನ್ನು ಜಾರಿಯಲ್ಲಿ ತಂದರು. ಮರುವರ್ಷ ಆ ಸಭೆ ವಿಸರ್ಜನೆಗೊಂಡಿತು. ಚುನಾವಣೆ ನಡೆಯಿತು. ವಿಟ್ಠಲ ಭಾಯಿ ಮತ್ತೆ ಸದಸ್ಯರಾದರಲ್ಲದೆ, ಸರ್ವಾನುಮತದಿಂದ ಪುನಃ ಅಧ್ಯಕ್ಷರಾಗಿ ಚುನಾಯಿತರಾದರು. ಆ ಸಲ ಇವರು ಸಂಸದೀಯ ವಿಧಾನಗಳ ಅಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಭೇಟಿ ನೀಡಿದರು.

	ರಾಷ್ಟ್ರೀಯತೆಯ ಬೆಳವಣಿಗೆಯನ್ನು ತಡೆಯುವ ಮತ್ತು ಜನತೆಯ ರಾಜಕೀಯ ಹಾಗೂ ಆರ್ಥಿಕ ಮುನ್ನಡೆಯ ಕ್ರಮಬದ್ಧ ಚಟುವಟಿಕೆಗಳನ್ನು ಹತ್ತಿಕ್ಕುವ ಸಾರ್ವಜನಿಕ ಭದ್ರತಾ ವಿಧೇಯಕವನ್ನು ಸರ್ಕಾರ ಮಂಡಿಸಿದಾಗ ಅದಕ್ಕೆ ಬಲವಾದ ವಿರೋಧ ಉಂಟಾಯಿತು. ವಿಧೇಯಕವನ್ನು ಕುರಿತ ಪ್ರವರ ಸಮಿತಿಯ ವರದಿಯನ್ನು ಮತಕ್ಕೆ ಹಾಕಿದಾಗ ಪರ ಮತ್ತು ವಿರೋಧ ಪಕ್ಷಗಳಿಗೆ ಸಮಸಂಖ್ಯೆಯ ಮತಗಳು ಬಿದ್ದುವು. ಸಭೆಯ ಅಧ್ಯಕ್ಷ ವಿಟ್ಠಲ ಭಾಯಿ ಪಟೇಲರು ಸಂಸದೀಯ ಸಂಪ್ರದಾಯವನ್ನು ಅನುಸರಿಸಿ, ಯಥಾಸ್ಥಿತಿ ಮುಂದುವರಿಯಬೇಕೆಂದು ತಮ್ಮ ನಿರ್ಧಾರಕ ಮತ ನೀಡಿದರು. ಮುರು ತಿಂಗಳ ಅನಂತರ ಸರ್ಕಾರ ಆಕ್ಷೇಪಾರ್ಹವೆಂದು ಭಾವಿಸಿದ ಕೆಲವು ಬಗೆಯ ರಾಜಕೀಯ ಪ್ರಚಾರಗಳನ್ನು ಹತ್ತಿಕ್ಕುವ ಇನ್ನೊಂದು ಭದ್ರತಾ ವಿಧೇಯಕವನ್ನು ಮಂಡಿಸುವ ಸೂಚನೆ ಕೊಟ್ಟಿತು. ಮೀರತ್‍ನಲ್ಲಿ ಪಿತೂರಿಯ ಆಪಾದನೆಯ ಮೇಲೆ ಕಮ್ಯುನಿಸ್ಟರು ವಿಚಾರಣೆಗೆ ಒಳಗಾಗಿದ್ದ ಸಮಯದಲ್ಲಿ ಈ ವಿಧೇಯಕವನ್ನು ಮಂಡಿಸುವಾಗ ಗೃಹಮಂತ್ರಿ ತನ್ನ ಭಾಷಣದಲ್ಲಿ ಆ ಆಪಾದನೆಯ ವಿವರಗಳನ್ನು ಅಕ್ಷರಶಃ ನಿಡಿದ್ದ. ವಿಧೇಯಕದ ಪರವಾಗಿ ಸರ್ಕಾರದ ವಾದಗಳು ಆ ವಿಚಾರಣೆಯ ಮೇಲೆ ಪ್ರಭಾವ ಬೀರಬಹುದೆಂಬ ಕಾರಣದಿಂದ ಈ ವಿಧೇಯಕವನ್ನು ಆ ವಿಚಾರಣೆ ಮುಗಿಯುವ ತನಕ ಮುಂದೂಡಬೇಕೆಂದು ವಿಟ್ಠಲ ಭಾಯಿ ಪಟೇಲರು ಸೂಚನೆ ನೀಡಿದರು. ಆದರೆ ಸರ್ಕಾರ ಇದನ್ನು ಒಪ್ಪಲಿಲ್ಲ. ವಿಧೇಯಕವನ್ನು ವಸ್ತುನಿಷ್ಠೆಯಿಂದ ಚರ್ಚಿಸುವುದು ಸಾಧ್ಯವೇ ಎಂಬ ವಿಚಾರವಾಗಿಯೂ ಅಭಿಪ್ರಾಯ ಸೂಚಿಸುವಂತೆ ವಿಟ್ಠಲ ಭಾಯಿ ಪಟೇಲರು ಸದಸ್ಯರನ್ನು ಕೋರಿದರು. ವಾದ ನಡೆಯಿತು. ಕೊನೆಯಲ್ಲಿ ಈ ಸೂಚನೆ ಕ್ರಮ ಬದ್ಧವಾಗಿಲ್ಲವೆಂದು ಸಭಾಪತಿಯಾಗಿ ಇವರು ತೀಮಾನ ನೀಡಿದರು. ಇವರ ಅಧಿಕಾರವನ್ನು ನಿಯಂತ್ರಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರ ನಿಡಿದ ಸಲಹೆಯ ಮೇರೆಗೆ ವೈಸ್ರಾಯ್ ಸಭಾಗೃಹಕ್ಕೆ ಬಂದು, ಭದ್ರತಾ ಮಸೂದೆಯನ್ನು ಮತ್ತೆ ಮಂಡಿಸುವ ಅಧಿಕಾರವನ್ನು ಸರ್ಕಾರಕ್ಕೆ ಕೊಡುವ ಸುಗ್ರಿವಾಜ್ಞೆಯನ್ನು ಹೊರಡಿಸುವುದಾಗಿ ಸಾರಿದ. ವಿಟ್ಠಲಭಾಯಿ ಪಟೇಲರಿಗೆ ವೈಸ್ರಾಯನ ಹೇಳಿಕೆಯನ್ನು ಪ್ರತಿಭಟಿಸುವ ಮಾರ್ಗವೊಂದೇ ಉಳಿಯಿತು. ಆದರೆ ಸರ್ಕಾರ ಮಸೂದೆಯನ್ನು ಮತ್ತೆ ಮಂಡಿಸಲು ಪ್ರಯತ್ನಿಸಲಿಲ್ಲ.

	1928ರಲ್ಲಿ ಸೈಮನನ ಅಧ್ಯಕ್ಷತೆಯಲ್ಲಿ ಒಂದು ಆಯೋಗ ಭಾರತಕ್ಕೆ ಬಂತು. ಬರೀ ಬಿಳಿಯರನ್ನೊಳಗೊಂಡ ಆ ಆಯೋಗವನ್ನು ಬಹಿಷ್ಕರಿಸಬೇಕೆಂದು ಜನರು ತೀರ್ಮಾನಿಸಿದರು. ಸೈಮನನನ್ನು ಸಭಾಗೃಹಕ್ಕೆ ಆಮಂತ್ರಿಸುವಂತೆ ಇವರನ್ನು ಒತ್ತಾಯಿಸಲು ಪ್ರಯತ್ನಗಳು ನಡೆದುವು. ಸೈಮನ್ ತಮ್ಮ ಮನೆಗೆ ಔಪಾಚಾರಿಕ ಭೇಟಿ ನೀಡುವವರೆಗೆ ಅವನನ್ನು ಸಭೆಗೆ ಆಮಂತ್ರಿಸುವುದು ಸಾಧ್ಯವಿಲ್ಲವೆಂದು ಪಟೇಲರು ಹೇಳಿದರು. ಕೊನೆಯಲ್ಲಿ ಅವನು ಅವರ ಇಚ್ಛೆಯಂತೆಯೇ ನಡೆದುಕೊಂಡ.

	1929ರಲ್ಲಿ ಲಾಹೋರಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕ್ಕೆ ಅಧ್ಯಕ್ಷರಾಗಿದ್ದ ಪಂಡಿತ ಜವಾಹರಲಾಲರು ಪೂರ್ಣ ಸ್ವಾತಂತ್ರ್ಯವೇ ಭಾರತದ ಗುರಿಯೆಂದು ಘೋಷಿಸಿದರು. ಜನತೆಯೊಡನೆ ಇರಬಯಸಿದ ವಿಟ್ಠಲ ಭಾಯಿ ಪಟೇಲರು ವಿಧಾನ ಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ರಾಷ್ಟ್ರೀಯ ಚಳವಳಿಯಲ್ಲಿ ಧುಮುಕಿದರು. ಸರ್ಕಾರ ಇವರನ್ನು ಸೆರೆಹಿಡಿಯಿತು. ಅಸ್ವಸ್ಥüತೆಯ ಕಾರಣ ಇವರು ಶಿಕ್ಷಾವಧಿ ಪೂರೈಸುವುದಕ್ಕೆ ಮುಂಚೆಯೇ ಬಿಡುಗಡೆ ಹೊಂದಿದರು. ವಿಟ್ಠಲಭಾಯಿ ಪಟೇಲರು ಯೂರೋಪಿಗೆ ಹೋದರು. 1933ರಲ್ಲಿ ಇವರು ಸ್ವಿಟ್‍ಜóರ್‍ಲೆಂಡಿನಲ್ಲಿ ಮರಣ ಹೊಂದಿದರು.						(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ